ಬರಿದಾಗಿದೆ ಕಾವೇರಿ: ಆದರೂ ನೀರಿಗೆ ಬೇಡಿಕೆ ಇಟ್ಟ ತಮಿಳುನಾಡು.
01 May, 2024
ಬೆಂಗಳೂರು : ಜೀವ ನದಿ ಕಾವೇರಿ ಬತ್ತಿದ್ದಾಳೆ. ನದಿಪಾತ್ರದ ಜನರಿಗೆ ನೀರಿಲ್ಲ..! ಇನ್ನೂ ಕಾವೇರಿಯನ್ನೇ ನಂಬಿದ ಜನರ ಪಾಡು ತೀರಾ ಕಷ್ಟವಾಗಿದೆ. ಈ ಮಧ್ಯ ತಮಿಳುನಾಡಿಗರು ತಮ್ಮ ಹಕ್ಕಿನ ನೀರು ಕೊಡಿ ಎನ್ನುವ ತಗಾದೆ ಶುರುವಿಟ್ಟುಕೊಂಡಿದ್ದಾರೆ. ಇದು ಸದ್ಯ ಇಲ್ಲಿನ ನಿವಾಸಿಗಳಿಗೆ ಆತಂಕ ಉಂಟಾಂಗಿದ್ದು, ಕುಡಿಯುವ ನೀರಿಗಾಗಿ ಬೋರ್‌ವೆಲ್‌ಗಳನ್ನು ಅವಲಂಭಿಸಬೇಕಾಗಿರುವುದು ಅನಿವಾರ್ಯವಾಗಿದೆ.
ಕನ್ನಡಿಗರು ಪೂಜಿಸುವ ಕಾವೇರಿ, ಕನ್ನಡ ನಾಡಿನಲ್ಲಿ ಹುಟ್ಟಿ, ನೂರಾರು ಕಿಲೋ ಮೀಟರ್ ದೂರಕ್ಕೂ ಹರಿಯುತ್ತಾ, ಕೋಟ್ಯಂತರ ಜೀವಗಳ ದಾಹ ನೀಗಿಸುವ ಕಾವೇರಿ ನೀರಿನ ವಿಚಾರ ಈಗ ಮತ್ತೇ ಕಿರಿ ಕಿರಿ ಶುರುವಾಗಿದೆ. ಮಳೆ ಬೀಳದ ಸಮಯದಲ್ಲಿ ತಮಿಳುನಾಡು ಸರ್ಕಾರ, ಮತ್ತೊಮ್ಮೆ ಕಾವೇರಿ ನೀರಿಗಾಗಿ ಬೇಡಿಕೆ ಇಟ್ಟಿದೆ. ಈ ಮೂಲಕ ಕಾವೇರಿ ನೀರಿನಲ್ಲಿ ರಾಜಕೀಯ ಮುಂದುವರಿದಿದೆ. ಭೀಕರ ಬರದಲ್ಲಿ ಕನ್ನಡ ನಾಡು ಪರದಾಡುವ ಕಾಲಕ್ಕೂ ತಮಿಳುನಾಡಿಗೆ 2.5 ಟಿಎಂಸಿ ನೀರು ಬೇಕು ಎನ್ನುವ ಬೇಡಿಕೆ ಇಟ್ಟಿರುವುದು ಹಾಸ್ಯಾಸ್ಪದವಾಗಿ ತೋರುತ್ತಿದ್ದೆ.

ವಾಸ್ತವದಲ್ಲಿ ಜೀವನದಿ ಕಾವೇರಿಯ ಉಗಮ ಸ್ಥಾನ ಕೊಡಗಿನಲ್ಲೇ ಬರಿದಾಗಿದ್ದು, ನದಿ ಪಾತ್ರದ ಹಳ್ಳಿಗಳಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕುಶಾಲನಗರದಾದ್ಯಂತ ಕಾವೇರಿ ನದಿ ಬತ್ತಿ ಹೋಗಿದ್ದರಿಂದ ಎಕರೆಗಟ್ಟಲೆ ಭೂಮಿ ಬರಡಾಗಿದೆ.
ನಿತ್ಯವೂ ನದಿಯಡಿಯಲ್ಲಿ ಮುಳುಗಿರುತ್ತಿದ್ದ ಬಂಡೆಗಳು ನೀರಿಲ್ಲದಿರುವುದರಿಂದ ಈಗ ಕಾಣಿಸುತ್ತಿವೆ. ಅಮೃತ್ 2.0 ರ ಮಹಾ ಯೋಜನೆಯ ಮೂಲಕ ಕುಶಾಲನಗರದಾದ್ಯಂತ ನೀರಿನ ಬಿಕ್ಕಟ್ಟನ್ನು ಕೊನೆಗೊಳಿಸುವ ಭರವಸೆ ನೀಡಿದ್ದರೂ, ಪೈಪ್‌ಲೈನ್ ಪೂರೈಕೆಯನ್ನು ಸಕ್ರಿಯಗೊಳಿಸಲು ನದಿಯಲ್ಲಿ ಸದ್ಯ ನೀರೇ ಇಲ್ಲ. ಈ ವರ್ಷ ಶೇ.50ಕ್ಕಿಂತ ಕಡಿಮೆ ಮಳೆಯಾಗಿದ್ದು, ನೀರಿನ ಸಮಸ್ಯೆ ಉತ್ತುಂಗದಲ್ಲಿದೆ. ಈ ವರ್ಷದ ಮಾರ್ಚ್ ಆರಂಭದಲ್ಲಿ, ಕುಶಾಲನಗರ ಪುರಸಭೆಯಾದ್ಯಂತ 32,000 ಕ್ಕೂ ಹೆಚ್ಚು ಜನಸಂಖ್ಯೆಗೆ ಪೈಪ್‌ಲೈನ್ ನೀರು ಸರಬರಾಜು ಮಾಡಲು ಬೈಚನಹಳ್ಳಿ ಬಳಿ ನೀರೆತ್ತುವ ಯಂತ್ರಾಗಾರ ಮಾಡಲಾಗಿದೆ. ಆದರೆ ಅಲ್ಲಿಯೇ ನದಿಯಿಂದ ನೀರು ದೊರಕದೆ ನೀರು ಸರಬರಾಜು ಮಂಡಳಿಯಿಂದ ನೀರು ಪೂರೈಕೆ ಸ್ಥಗಿತಗೊಳ್ಳಿಸಲಾಗಿದೆ. ಹೀಗಾಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಮೊದಲೇ ಹೇಳಿದಂತೆ ಕರ್ನಾಟಕದಲ್ಲಿ ಮಳೆ ಇಲ್ಲ, ಅದರಲ್ಲೂ ಕಾವೇರಿ ನದಿ ಹರಿಯುವ ಪ್ರದೇಶದಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ಹೀಗಾಗಿ ಕಾವೇರಿ ಕೊಳ್ಳದ ಜನರು ಪರದಾಟ ಪಡುತ್ತಿದ್ದಾರೆ. ಪರಿಸ್ಥಿತಿ ಹೀಗೆ ಭಯಾನಕವಾದ ಸಮಯದಲ್ಲಿ ಕೂಡ ತಮಿಳುನಾಡು ಸರ್ಕಾರ ಮಾತ್ರ ನೀರಿಗಾಗಿ ಕಿರಿಕ್ ಶುರು ಮಾಡಿದೆ. ಕಾವೇರಿ ನೀರು ಬಿಡಿ ಅಂತಾ ಈಗ ಕರ್ನಾಟಕದ ಜೀವ ಹಿಂಡಲು ಮುಂದಾಗಿದೆ. ತಮಿಳುನಾಡಿಗೆ ಈ ತಿಂಗಳು ಬರಬೇಕಿದ್ದ 2.5 ಟಿಎಂಸಿ ನೀರನ್ನ ಬಿಡುಗಡೆ ಮಾಡಿ ಎಂದು, ತಮಿಳುನಾಡು ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಈಗ ಮನವಿ ಸಲ್ಲಿಸಿದೆ.
ಇದೇ ವೇಳೆ ತಮಿಳುನಾಡು ಸರ್ಕಾರ ಕರ್ನಾಟಕದ ವಿರುದ್ಧ ಬಾಯಿಗೆ ಬಂದಂತೆಲ್ಲ ಆರೋಪ ಮಾಡಿದೆ. ಮಳೆ ಕೊರತೆ ಕಾರಣ ನೀಡಿ ಕರ್ನಾಟಕ ಸುಪ್ರೀಂ ಆದೇಶ ಪಾಲನೆಯನ್ನೇ ಮಾಡುತ್ತಿಲ್ಲ. ಸೂಚನೆ ನೀಡಿರುವ ಪ್ರಮಾಣದಲ್ಲಿ ನೀರು ಹರಿಸುತ್ತಿಲ್ಲ. ಫೆಬ್ರವರಿ 1 ರಿಂದ, ಏಪ್ರಿಲ್ 28 ರವರೆಗೂ ಪರಿಸರಕ್ಕೆ 7.33 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, ಕರ್ನಾಟಕ ರಾಜ್ಯ ಮಾತ್ರ 5.31 ಟಿಎಂಸಿ ನೀರು ಹರಿಸಿ ಇಲ್ಲಿಯೂ 2 ಟಿಎಂಸಿ ಬಾಕಿಯಾಗಿ ಉಳಿಸಿಕೊಂಡಿದೆ ಎಂದು ತಮಿಳುನಾಡು ಆರೋಪ ಮಾಡುತ್ತಿದೆ.
ಕನ್ನಡಿಗರು ಕುಡಿಯಲು ಸಹ ನೀರು ಇಲ್ಲದೆ ಪರದಾಡುವ ಈ ಸಂದರ್ಭಧಲ್ಲಿ ತಮಿಳುನಾಡು ಸರ್ಕಾರ ಮಾತ್ರ ಕಾವೇರಿ ನೀರು ಬಿಡಿ ಅಂತಾ ಮತ್ತೆ ಕಿರಿಕ್ ತೆಗೆದಿದೆ. ಈ ಮೂಲಕ ಉಳಿದ ಅಲ್ಪಸ್ವಲ್ಪ ನೀರಿಗೂ ಕನ್ನಡಿಗರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಕಾವೇರಿ ನದಿ ಸಂಪೂರ್ಣವಾಗಿ ಬತ್ತಿ ಹೋದ ದೃಶ್ಯಗಳು ಇಲ್ಲಿನ ನಿವಾಸಿಗಳಿಗೆ ಆತಂಕ ಉಂಟು ಮಾಡಿದ್ದು, ಕುಡಿಯುವ ನೀರು ಪೂರೈಕೆಗಾಗಿ ಅಧಿಕಾರಿಗಳು ಬೋರ್‌ವೆಲ್‌ನಿಂದ ನೀರು ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ಇನ್ನೂ 'ಹತ್ತು ವರ್ಷಗಳ ಹಿಂದೆ ಸ್ಥಳೀಯ ಅಧಿಕಾರಿಗಳು ಹಾರಂಗಿ ಜಲಾಶಯದಿಂದ ಕುಶಾಲನಗರಕ್ಕೆ 80 ಕೋಟಿ ರೂ.ವೆಚ್ಚದಲ್ಲಿ ಕುಡಿಯುವ ನೀರು ತರಲು ಯೋಜನೆ ರೂಪಿಸಿದ್ದರು. ಕುಶಾಲನಗರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಮಂಡಿಸಲಾಯಿತು. ಆದರೆ, ಈ ಯೋಜನೆ ಕಾರ್ಯರೂಪಕ್ಕೆ ಬರಲೇ ಇಲ್ಲ’ ಎನ್ನುವ ಆರೋಪವೂ ಕೇಳಿಬರುತ್ತಿದೆ.

ಈ ಕುರಿತು ಮೇ. 16ಕ್ಕೆ ಮತ್ತೊಂದು ಸುತ್ತಿನ ಸಭೆ ಜರುಗಲಿದ್ದು, ಇದರ ಜೊತೆಗೆ ತಮಿಳುನಾಡಿನ ಮೆಟ್ಟೂರಿನಲ್ಲಿ 20 ಟಿಎಂಸಿ ಮಾತ್ರ ನೀರಿದೆ. ಕುಡಿಯಲು & ಪರಿಸರಕ್ಕೆ ಆ ನೀರನ್ನ ಬಳಸಲಾಗುತ್ತಿದೆ. ಬಾಕಿ ಉಳಿದ ನೀರನ್ನು ಕರ್ನಾಟಕ ರಿಲೀಸ್ ಮಾಡಲಿ ಅಂತ ಈಗ ತಮಿಳುನಾಡು ಸರ್ಕಾರ ತಮ್ಮ ಅಧಿಕಾರಿಗಳ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಮನವಿ ಸಲ್ಲಿಸಿದೆ. ಹೀಗೆ 2 ರಾಜ್ಯಗಳ ನಡುವೆ ಸಭೆಯಲ್ಲಿ ಸಮನ್ವಯತೆ ಮೂಡದ ಕಾರಣಕ್ಕೆ, ಮೇ 16 ಕ್ಕೆ ಮತ್ತೊಂದು ಸುತ್ತಿನ ಸಭೆಯನ್ನ ನಡೆಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
Publisher: ಕನ್ನಡ ನಾಡು | Kannada Naadu